ಆಸ್ಮಿನಾ ಅವರಿಗೆ 48 ವರ್ಷ ಪ್ರಾಯ. ತಮ್ಮ ತಾಯಂದಿರು ಗೋದಿಯ ಹುಲ್ಲಿನ ಕಡ್ಡಿಗಳಿಂದ ಚಿಕಣಿ ಬುಟ್ಟಿಗಳನ್ನು ಹೆಣೆಯುತ್ತಿದ್ದ ಕಾಲವನ್ನು ನೆನಪಿಸಿಕೊಂಡು ಸಹೋದ್ಯೋಗಿ ಜುಬೈದಾ ಅವರೊಂದಿಗೆ ನಗುತ್ತಿದ್ದರು. ಮೇವಾತ್ ಪ್ರದೇಶದ ಹೆಚ್ಚಿನ ಹುಡುಗಿಯರಂತೆ ಇವರೂ ಚಿಕಣಿ ಬುಟ್ಟಿಗಳನ್ನು ಹೆಣೆಯುವ ಕಲೆಯನ್ನು ಕಲಿತರು. ಅದನ್ನು ಕಲಿಯಲು ಅವರ ತಾಯಂದಿರು ಒತ್ತಾಯಿಸಿದ್ದರು. ಆದರೆ ಅದೇ ಕೌಶಲ್ಯ ಮುಂದೊಂದು ದಿನ ತಮ್ಮ ಜೀವನೋಪಾಯಕ್ಕೆ ದಾರಿಯಾಗಬಹುದು ಎಂದು ಯಾವತ್ತೂ ಊಹಿಸಿರಲಿಲ್ಲ.
“ನಾವು ಅವನ್ನು ತಯಾರಿಸಿ ನಮ್ಮ ನೆಂಟರಿಗೆ ಕೊಡುತ್ತಿದ್ದೆವು. ಅಬ್ ಜಬ್ ಬಿಕನ್ ಲಗೆನ್ ತೋ ಹಮ್ ನಾ ದೇವನ್ ಫ್ರೀ ಮೇ [ಈಗ ಮಾರುತ್ತೇವೆ, ಫ್ರೀಯಾಗಿ ಕೊಡುವುದಿಲ್ಲ]” ಎನ್ನುತ್ತಾ ಆಸ್ಮಿನಾ ನಗುತ್ತಾರೆ.
ಇವರು ಹರ್ಯಾಣದ ನೂಹ್ ಜಿಲ್ಲೆಯ ಘಶೇರಾ ಗ್ರಾಮದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿದ್ದ ಸಿಮೆಂಟ್ ಬೆಂಜ್ ಮೇಲೆ ಕುಳಿತುಕೊಂಡು ದೇಸಿ ಗೆಹುನ್ನ (ಸ್ಥಳೀಯ ಗೋಧಿ ಹುಲ್ಲು) ತೋಳಿನಷ್ಟು ಉದ್ದದ ಕಡ್ಡಿಯನ್ನು ತೆಗೆದುಕೊಂಡು ಚೂಪಾದ ಸೂಜಿಯಿಂದ ಐದು ಎಳೆಗಳಾಗಿ ಸೀಳುತ್ತಿದ್ದರು. ಅದರಿಂದ ಒಂದು ಎಳೆಯನ್ನು ತೆಗೆದುಕೊಂಡು ತುಂಬಾ ಚಾಣಾಕ್ಷತೆಯಿಂದ ಚಂಗೇರಿ (ಸಣ್ಣ ಬುಟ್ಟಿ) ಹೆಣೆಯಲಾರಂಭಿಸಿದರು.
"ಅಗರ್ ಘರ್ ಮೇ ಮೆಹ್ಮಾನ್ ಆಗೋ ಔರ್ ಚಂಗೇರಿ ಮೇ ರೋಟಿ ಧರ್ ಕೆ ನಾ ದಿ, ತೋ ಯು ಕೆಹೆಂಗೆ ಕಿ ಆಸ್ಮಿನಾ ನೆ ಪ್ಲೇಟ್ ಮೇ ರೋಟಿ ಧರ್ ಕೆ ದಿ, ಚಂಗೇರಿ ಮೇ ನಾ ದಿ [ಮನೆಗೆ ಬರುವ ಅತಿಥಿಗಳಿಗೆ ಚಂಗೇರಿಯಲ್ಲಿ ರೊಟ್ಟಿ ಇಟ್ಟು ಕೊಡದಿದ್ದರೆ, ಅವರು ಆಸ್ಮಿನಾ ತಟ್ಟೆಯಲ್ಲಿ ರೊಟ್ಟಿಗಳನ್ನು ಬಡಿಸಿದಳು ಎಂದು ದೂರುತ್ತಾರೆ]” ಎಂದು ಆಸ್ಮಿನಾ ಹೇಳಿದರು.
ಬೇರೆ ಬೇರೆ ಉದ್ದೇಶಗಳಿಗೆ ಬಳಸಲ್ಪಡುವ ಚಂಗೇರಿಯನ್ನು ಹರ್ಯಾಣ ಮತ್ತು ರಾಜಾಸ್ಥಾನದ ಮೇವಾತ್ ಪ್ರದೇಶದ ಮಹಿಳೆಯರು ಸಾಂಪ್ರದಾಯಿಕ ವಿಧಾನಗಳಿಂದ ನೇಯುತ್ತಾರೆ. ಮದುವೆಗಳು, ಈದ್ ಮತ್ತು ಇತರ ಹಬ್ಬದ ಸಂದರ್ಭಗಳಲ್ಲಿ ಇವುಗಳು ಉಡುಗೊರೆ ನೀಡುತ್ತಿದ್ದ ಕಾಲವೊಂದಿತ್ತು.

















